ಕೇಳಪ್ಪನ್, ಕೆ
1890-1971. ಕೇರಳದ ಸಮಾಜಸೇವಾ ಧುರೀಣ, ಗಾಂಧಿಯವರ ಅನುಯಾಯಿ, ಕೇರಳದ ಆಧುನಿಕ ಸಾಮಾಜಿಕ-ರಾಜಕೀಯ ಕ್ರಾಂತಿಗಾಗಿ ಶ್ರಮಿಸಿದವರು. ಕೇರಳದ ಗಾಂಧಿಯೆಂದು ಪ್ರಸಿದ್ಧರು. ಉತ್ತರ ಮಲಬಾರಿನ ಕ್ವಿಲಾಂಡಿಯ ಬಳಿ ಇರುವ ಮುಡಡಿಯಲ್ಲಿ 1890ರ ಸೆಪ್ಟೆಂಬರ್ 15ರಂದು ಜನನ. ತಂದೆ ವಕೀಲನೊಬ್ಬನ ಬಳಿ ಗುಮಾಸ್ತೆ. ಕೇಳಪ್ಪನರ ಮೊದಲಿನ ವಿದ್ಯಾಭ್ಯಾಸ ಐನಿಕ್ಕಾಡ್ ಮತ್ತು ಕ್ವಿಲಾಂಡಿಯಲ್ಲಿ ನಡೆಯಿತು. ತಂದೆಯ ಅಲ್ಪ ವರಮಾನದಿಂದ ಮುಂದೆ ಓದುವುದು ಅಸಾಧ್ಯವಾಗಿದ್ದಾಗ ಬೇಸೆಲ್ ಮಿಷನ್ನಿನ ವಿದ್ಯಾರ್ಥಿವೇತನ ದೊರೆತು ತಲಚ್ಚೇರಿಯ ಬಿ.ಇ.ಎಂ. ಪ್ರೌಢಶಾಲೆಯಲ್ಲೂ ಕಲ್ಲೀಕೋಟೆಯ eóÁಮೊರಿನ್ ಕಾಲೇಜಿನಲ್ಲೂ ಓದು ಮುಂದುವರಿಸಿದರು. ಅವರು ಎಫ್.ಎ ತರಗತಿಯಲ್ಲಿದ್ದಾಗ ಆ ಕಾಲೇಜಿನ ಪ್ರಿನ್ಸಿಪಾಲ್ ಸಂಘಟಿಸಿದ್ದ ಸಮಾಜಸೇವಾ ಕೂಟದಲ್ಲಿ ಕೇಳಪ್ಪನರೂ ಭಾಗವಹಿಸಿದ್ದರು. ಹರಿಜನ ವಿದ್ಯಾರ್ಥಿಯೊಬ್ಬನನ್ನು ಕಾಲೇಜಿಗೆ ಸೇರಿಸಿದ್ದಕ್ಕೆ ಸವರ್ಣ ಹಿಂದುಗಳಿಂದ ಬಂದ ವಿರೋಧವನ್ನು ಎದುರಿಸಿ ಕೇಳಪ್ಪನ್ ಮತ್ತು ಅವರ ಗೆಳೆಯರು ಹೋರಾಡಿದರು. ಕೇಳಪ್ಪನರು ತಮ್ಮ ಜೀವಮಾನವಿಡೀ ನಡೆಸಿದ ಅಸ್ಪøಶ್ಯತಾ ನಿರೋಧ ಚಳವಳಿಯಲ್ಲಿ ತೊಡಗಿದ್ದು ಆಗ. 

ಅರವಿಂದ ಘೋಷರು ಪ್ರಕಟಿಸುತ್ತಿದ್ದ ವಂದೇಮಾತರಂ ಪತ್ರಿಕೆಯನ್ನು ಕೇಳಪ್ಪನ್ ತಪ್ಪದೆ ಓದುತ್ತಿದ್ದರು. ಕ್ರಾಂತಿಕಾರರೊಡನೆ ಸೇರಿದರು. ಬಾಂಬ್ ತಯಾರಿಸುವುದನ್ನೂ ಕಲಿತರು. ಆದರೆ ವ್ಯಾಸಂಗ ಬಿಡಲಿಲ್ಲ.  ಮದ್ರಾಸ್ ಕ್ರಿಶ್ಚನ್ ಕಾಲೇಜಿನಲ್ಲಿ ಓದಿ ಬಿ.ಎ ಪದವಿ ಪಡೆದರು. ಆರ್ಥಿಕ ಮುಗ್ಗಟ್ಟಿನಿಂದ ಮುಂದೆ ಓದಲಾಗದೆ, ತಂದೆ ಆಶಿಸಿದ್ದಂತೆ ವಕೀಲರಾಗಲಾರದೆ ಚಂಗನಸೇರಿಯ ಸೆಂಟ್ ಬರ್‍ಗ್ರಾಂಟ್ಸ್ ಪ್ರೌಢಶಾಲೆಯಲ್ಲಿ  ಉಪಾಧ್ಯಾಯರಾದರು. ಆ ಶಾಲೆಯ ವ್ಯವಸ್ಥಾಪಕರಿಗೂ ಇವರಿಗೂ ಭಿನ್ನಾಭಿಪ್ರಾಯ ಉದ್ಭವಿಸಿ ಇವರು ಆ ಕೆಲಸ ಬಿಟ್ಟರು. ತಮ್ಮ ಸ್ನೇಹಿತರೊಡನೆ ನಾಯರ್ ಸರ್ವಿಸ್ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕೇಳಪ್ಪನರೇ ಈ ಸಂಸ್ಥೆಯ ಮೊದಲ ಅಧ್ಯಕ್ಷರು. ಮನ್ನಾಥ್ ಪದ್ಮನಾಭನ್ ಅವರ ಕಾರ್ಯದರ್ಶಿ. ಆ ಸಂಸ್ಥೆ ಕಾರುಕಾಚಲ್‍ನಲ್ಲಿ ಒಂದು ಪ್ರೌಢಶಾಲೆ ತೆರೆಯಿತು. ಅದಕ್ಕೆ ಕೇಳಪ್ಪನ್ ಮುಖ್ಯೋಪಾಧ್ಯಾಯರು. ಈಗ ಆ ಸಂಸ್ಥೆ ಬೆಳೆದು ಅನೇಕ ಶಾಲೆ ಮತ್ತು ಕಾಲೇಜುಗಳನ್ನು ನಡೆಸುತ್ತಿದೆ. ಕಾರುಕಾಚಲ್‍ನಲ್ಲಿ ಉಪಾಧ್ಯಾಯರಾಗಿದ್ದಾಗ ಅವರಿಗೆ ಮದುವೆಯಾಯಿತು. ಪತ್ನಿ ಅಮ್ಮಾಳು ಅಮ್ಮ. 6 ವರ್ಷಗಳ ಅನಂತರ ಅವರಿಗೆ ಪತ್ನೀವಿಯೋಗವಾಯಿತು. ಕಾರುಕಾಚಲ್ ಬಿಟ್ಟು ಕೇಳಪ್ಪನ್ ಬೊಂಬಾಯಿಗೆ ಬಂದು ಅಲ್ಲಿ ಉಪಾಧ್ಯಾಯವೃತ್ತಿ ಕೈಗೊಂಡರಲ್ಲದೆ ಜೊತೆಗೆ ಎಲ್ ಎಲ್ ಬಿ ವ್ಯಾಸಂಗದಲ್ಲೂ ತೊಡಗಿದರು. ಕೇಳಪ್ಪನ್ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರಂಭಿಸಿದ್ದು ಆ ಸಮಯದಲ್ಲಿ. ಅವರು ಎಲ್ ಎಲ್ ಬಿ ಪರೀಕ್ಷೆಗೆ ಕೂರದೆ ಮಲಬಾರಿಗೆ ಹಿಂದಿರುಗಿ ಅಸಹಕಾರ ಚಳವಳಿಯ ನಾಯಕರಾದರು. 1921ರಲ್ಲಿ ಮಲಬಾರಿನಲ್ಲಿ ದಂಗೆಯಾದಾಗ, ಇವರು ಪೊನ್ನಾನಿ ತಾಲ್ಲೂಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ಮಲಬಾರಿನ ಮುಸ್ಲಿಮರ ಒಂದು ಗುಂಪು ಪೊನ್ನಾನಿಯ ಖಜಾನೆಯನ್ನು ಲೂಟಿ ಮಾಡಲು ಹೊರಟಿತ್ತು. ಕೇಳಪ್ಪನ್ ಅದನ್ನು ತಡೆದು, ಸಶಸ್ತ್ರ ಪೋಲೀಸರೊಂದಿಗೆ ಆಗುತ್ತಿದ್ದ ಘರ್ಷಣೆ ಮತ್ತು ಅನಾಹುತವನ್ನು ತಪ್ಪಿಸಿದರು.  ಹಿಂದೂ ಪತ್ರಿಕೆ ಕೇಳಪ್ಪನರನ್ನು ಹೊಗಳಿ ಬರೆಯಿತು. ಸ್ವಲ್ಪ ಕಾಲದಲ್ಲೆ ಅವರು ಬ್ರಿಟಿಷ್ ಸರ್ಕಾರದ ಬಂಧನಕ್ಕೆ ಒಳಗಾದರು. ಅವರ ಜೊತೆಯವರಾದ ಬಾಲಕೃಷ್ಣ ಮೆನನ್‍ರವರನ್ನು ಜೈಲಿನಲ್ಲಿ ಪೋಲೀಸರು ಕೊಂದರು.

ಕೇಳಪ್ಪನ್ ಜೈಲಿನಿಂದ ಹೊರಬಂದ ಮೇಲೆ ಗಾಂಧೀಜಿವರ ರಚನಾತ್ಮಕ ಮತ್ತು ಹರಿಜನೋದ್ಧಾರ ಕಾರ್ಯಗಳಲ್ಲಿ ಮುಂದಾಳಾದರು. ಕೇರಳ ಪ್ರದೇಶ ಕಾಂಗ್ರೆಸ್ ಸಂಸ್ಥೆಯ ಮೊದಲ ಅಧ್ಯಕ್ಷರು ಅವರೇ. 1930ರ ಉಪ್ಪಿನ ಸತ್ಯಾಗ್ರಹ ನಡೆಸಲು ಮಲಬಾರಿನ ಅನೇಕ ಕಾಂಗ್ರೆಸ್ ನಾಯಕರು ಒಪ್ಪದಿದ್ದರೂ ಕೇಳಪ್ಪನ್ ತಮ್ಮ ಅನುಯಾಯಿಗಳೊಡನೆ ಧೈರ್ಯಮಾಡಿ ಗಾಂಧೀಜಿಯ ಕರೆಯಂತೆ ನಡೆದು ಸತ್ಯಾಗ್ರಹ ನಡೆಸಿದರು. ಮತ್ತೊಮ್ಮೆ ಇವರನ್ನು ಬಂಧಿಸಲಾಯಿತು. ತಿರುವಾಂಕೂರಿನ ವೈಕೆಕ್ಳೆಂ ಸತ್ಯಾಗ್ರಹದ ನಾಯಕತ್ವವಹಿಸಿದವರು ಕೇಳಪ್ಪನ್.

ಅಸ್ಪøಶ್ಯತಾ ನಿವಾರಣೆಗಾಗಿ 1931ರಲ್ಲಿ ಕೇಳಪ್ಪನ್ ನಿರಶನ ವ್ರತ ಕೈಗೊಂಡರು. 1940 ಮತ್ತು 1942ರಲ್ಲಿ ಪುನಃ ಇವರನ್ನು ಬಂಧಿಸಲಾಗಿತ್ತು. 1951ರ ವರೆಗೆ ಕೇಳಪ್ಪನ್ ಪ್ರದೇಶ ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. 1951ರಲ್ಲಿ ಕಾಂಗ್ರೆಸಿಗೆ ರಾಜೀನಾಮೆ ಕೊಟ್ಟು ಕಿಸಾನ್ ಮeóïದೂರ್ ಪ್ರಜಾಪಕ್ಷ ಸೇರಿ ಅದನ್ನು ಬೆಳೆಸಿದರು. ಅನಂತರ ಪ್ರಜಾ ಸಮಾಜವಾದಿ ಪಕ್ಷದ ನಾಯಕರಾದರು. 1952ರಲ್ಲಿ ಪೊನ್ನಾನಿ ಕ್ಷೇತ್ರದಿಂದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕೇಳಪ್ಪನ್‍ಗೆ ವಿಜಯ ದೊರಕಿತು. 1955ರಲ್ಲಿ ಇವರು ರಾಜಕೀಯವನ್ನು ತೊರೆದು ಸರ್ವೋದಯ ಚಳವಳಿಯ ನಾಯಕತ್ವ ವಹಿಸಿದರು. ಜಯಪುರದಲ್ಲಿ ನಡೆದ ಸರ್ವೋದಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ರಾಜಕೀಯ ಪಕ್ಷಗಳ ದುರ್ವರ್ತನೆಯ ವಿರುದ್ಧ 1957ರಲ್ಲಿ ಕೇಳಪ್ಪನ್ ನಿರಶನ ವ್ರತ ಕೈಗೊಂಡರು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಒಟ್ಟಾಗಿ, ಮುಂದೆ ಶಾಂತಿಪಾಲನೆ ಮಾಡುವುದಾಗಿ ಭರವಸೆ ನೀಡಿದ ಮೇಲೆಯೇ ಅವರ ನಿರಶನ ವ್ರತ ನಿಂತದ್ದು. ಆಗ ಕೇರಳದಲ್ಲಿದ್ದ ಮಾಕ್ರ್ಸಿಸ್ಟ್-ಮುಸ್ಲಿಂ ಲೀಗ್ ಸರ್ಕಾರದ ನೀತಿಯ ವಿರುದ್ಧವಾಗಿ ತಾಳಿಯ ದೇವಾಲಯದಲ್ಲಿ ಪೂಜೆ ಮಾಡುವ ಹಕ್ಕಿನ ಸಂರಕ್ಷಣಾರ್ಥ ನಡೆಸಿದ ಚಳವಳಿಗಾಗಿ 1969ರಲ್ಲಿ ಸರ್ಕಾರ ಇವರನ್ನು ಬಂಧಿಸಿತ್ತು. ಪೆರಿಂತಾಳ್ಮನ್ನ ಪೋಲಿಸ್ ಠಾಣೆಯಲ್ಲಿ ಕೇಳಪ್ಪನ್ ಉಪವಾಸ ಆರಂಭಿಸಿದರು. 5 ದಿನಗಳಲ್ಲಿ ಅವರ ಉದ್ದೇಶ ಫಲಿಸಿತ್ತು. ಕೇಳಪ್ಪನರಿಗೆ 1957ರಲ್ಲಿ ರಾಜ್ಯಪಾಲ ಹುದ್ದೆ ನೀಡುವ ಸೂಚನೆ ಬಂದಿತ್ತು. ಅವರು ಅದನ್ನು ಸ್ವೀಕರಿಸಲಿಲ್ಲ. ಪದ್ಮವಿಭೂಷಣ ಪ್ರಶಸ್ತಿಯನ್ನು ಅವರು ನಿರಾಕರಿಸಿದರು.

ಕೇಳಪ್ಪನ್ ಸಹಕಾರ ಚಳುವಳಿಯಲ್ಲೂ ಪತ್ರಿಕೋದ್ಯಮದಲ್ಲೂ ಸಾಕಷ್ಟು ಕೆಲಸ ಮಾಡಿದರು. 1936-38ರಲ್ಲಿ ಮಾತೃಭೂಮಿಯ ಸಂಪಾದಕರಾಗಿದ್ದರು. 1940ರಲ್ಲಿ ಬ್ರಿಟಿಷರ ವಿರುದ್ಧ ಗಾಂಧಿಯವರು ನಡೆಸಿದ ಸತ್ಯಾಗ್ರಹ ಹೋರಾಟದಲ್ಲಿ ನೇಮಿತರಾಗಿದ್ದ ಮೊದಲ ಸತ್ಯಾಗ್ರಹಿ ಕೇಳಪ್ಪನ್. 1957ರಲ್ಲಿ ಮಂಜೇಶ್ವರದಲ್ಲಿ ವಿನೋಭಾಭಾವೆಯವರು ಇವರನ್ನು ಮೊದಲ ಶಾಂತಿ ಸೈನಿಕನೆಂದು ಗೊತ್ತುಮಾಡಿ ಪುರಸ್ಕರಿಸಿದರು.

ತಮ್ಮ ಕಡೆಯ ದಿನಗಳಲ್ಲಿ ಕೇಳಪ್ಪನ್ ಸರ್ವೋದಯ ಸಂಘದ ಅಧ್ಯಕ್ಷತೆ, ಕೋಳಿಕ್ಕೋಡ್ ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ತಾಳಿ ದೇವಸ್ಥಾನ ಜೀರ್ಣೋದ್ಧಾರ-ಈ ಕಾರ್ಯಗಳಲ್ಲಿ ಮಾತ್ರ ಆಸಕ್ತಿಯಿಟ್ಟುಕೊಂಡಿದ್ದರು. ಅವರು 1971ರ ಅಕ್ಟೋಬರ್ 7ರಂದು ಕೋಳಿಕ್ಕೋಡಿನಲ್ಲಿ ನಿಧನರಾದರು.				     (ಕೆ.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ